ಗುಪ್ತರು

	ಕ್ರಿ.ಶ. 4-6ನೆಯ ಶತಮಾನಗಳಲ್ಲಿ ಉತ್ತರ ಭಾರತದಲ್ಲಿ ಆಳುತ್ತಿದ್ದ ಒಂದು ಪ್ರಮುಖ ರಾಜವಂಶ. ಗುಪ್ತರ ಕಾಲಕ್ಕೆ ಸಂಬಂಧಿಸಿದ ಅನೇಕ ಶಾಸನಗಳೂ ನಾಣ್ಯಗಳೂ ಸಾಹಿತ್ಯಕ ಆಧಾರಗಳೂ ದೊರೆಯುವುದರಿಂದ ಇವರ ಕಾಲದ ಇತಿಹಾಸವನ್ನು ಕುರಿತ ಅನೇಕ ವಿವರಗಳು ತಿಳಿದುಬಂದಿವೆ. ಗುಪ್ತರ ಕಾಲವನ್ನು ಭಾರತ ಇತಿಹಾಸದ ಸುವರ್ಣಯುಗವೆಂದು ವರ್ಣಿಸಲಾಗಿದೆ.

	ಗುಪ್ತವಂಶಕ್ಕೆ ಸೇರಿದ 1ನೆಯ ಚಂದ್ರಗುಪ್ತನಿಗೂ ಹಿಂದಿನ ಅರಸರ ವಿಷಯ ಹೆಚ್ಚಿಗೆ ತಿಳಿದಿಲ್ಲ. ಶುಂಗ ಮತ್ತು ಶಾತವಾಹನರ ಕಾಲಕ್ಕೆ ಸಂಬಂಧಿಸಿದಂತೆ ಗುಪ್ತ ಎಂದು ಕೊನೆಗೊಳ್ಳುತ್ತಿದ್ದ ಹಲವು ಅಧಿಕಾರಿಗಳ ಹೆಸರುಗಳು ಲಬ್ಧವಾಗಿವೆ. ಆದರೆ ಇವು ಗುಪ್ತ ಎಂಬ ವಂಶವನ್ನು ಸೂಚಿಸುತ್ತವೆ ಎಂದು ಹೇಳಲಾಗದು. ಒಂದನೆಯ ಚಂದ್ರಗುಪ್ತನ ಅಜ್ಜ ಮಹಾರಾಜ ಶ್ರೀಗುಪ್ತ, ತಂದೆ ಮಹಾರಾಜ ಘಟೋತ್ಕಚ, ಇವರಿಗೆ ಕೇವಲ 'ಮಹಾರಾಜ' ಎಂಬ ಬಿರುದಿತ್ತು. ಆದರೆ ಶಾಸನಗಳಲ್ಲಿ ಘಟೋತ್ಕಚನ ಮಗನನ್ನು ಮಹಾರಾಜಾಧಿರಾಜ ಚಂದ್ರಗುಪ್ತನೆಂದು ವರ್ಣಿಸಲಾಗಿದೆ. ಚಂದ್ರಗುಪ್ತ ತನ್ನ ಪೂರ್ವಿಕರಿಗಿಂತ ಹೆಚ್ಚಿನ ಪ್ರಾಬಲ್ಯವನ್ನು ಹೊಂದಿದ್ದನೆಂಬುದನ್ನು ಬಹುಶಃ ಇದು ಸೂಚಿಸುತ್ತದೆ. ಮಗಧದೇಶದ ಮೃಗಶಿಖಾವನದಲ್ಲಿ ಮಹಾರಾಜ ಚೆ. ಲಿ. ಕಿ. ತೋ ಎಂಬವನು ಯಾತ್ರಿಕರಿಗಾಗಿ ದೇವಾಲಯವೊಂದನ್ನು ಕಟ್ಟಿಸಿದನೆಂದು ಚೀನ ದೇಶದ ಯಾತ್ರಿಕನಾದ ಇತ್ಸಿಂಗ ಹೇಳಿದ್ದಾನೆ. ಇವನು ಗುಪ್ತವಂಶದ ಮಹಾರಾಜ ಶ್ರೀಗುಪ್ತ ಎಂದು ಊಹಿಸಲಾಗಿದೆ. ಶ್ರೀಗುಪ್ತನೂ ಆತನ ಮಗನಾದ ಘಟೋತ್ಕಚನೂ ಬಂಗಾಳದ ಕೆಲವು ಭಾಗಗಳಲ್ಲಿ ಆಳುತ್ತಿದ್ದಿರಬೇಕು.

	ಗುಪ್ತವಂಶ ಪ್ರಾಮುಖ್ಯಕ್ಕೆ ಬಂದದ್ದು ಘಟೋತ್ಕಚನ ಮಗನಾದ 1ನೆಯ ಚಂದ್ರಗುಪ್ತನ ಕಾಲದಲ್ಲಿಯೇ. ಶಾಸನಗಳಲ್ಲಿ ಇವನಿಗೆ ಮಹಾರಾಜಾಧಿರಾಜನೆಂಬ ಬಿರುದಿದ್ದದ್ದು ಕಂಡುಬರುತ್ತದೆ. ಅಲ್ಲದೆ ಇವನು ಅಚ್ಚುಹಾಕಿಸಿದ ಚಿನ್ನದ ನಾಣ್ಯಗಳೂ ದೊರೆತಿವೆ. ಇವನು ಲಿಚ್ಛವಿ ವಂಶಕ್ಕೆ ಸೇರಿದ ಕುಮಾರದೇವಿಯನ್ನು ಮದುವೆಯಾಗಿದ್ದ. ಆ ವೇಳೆಗೆ ಬಿಹಾರ ಪ್ರಾಂತ್ಯದ ಉತ್ತರ ಭಾಗದಲ್ಲಿ ವೈಶಾಲಿ ಮತ್ತು ನೇಪಾಳಗಳ ನಡುವಣ ಪ್ರದೇಶ ಲಿಚ್ಚವಿಯರ ಆಳ್ವಿಕೆಗೆ ಒಳಪಟ್ಟಿತ್ತು. ಈ ಪ್ರದೇಶ ಗುಪ್ತರು ಆಳುತ್ತಿದ್ದಿರಬಹುದಾದ ಪ್ರದೇಶಕ್ಕೆ ಹೊಂದಿದಂತಿತ್ತು. ಆ ವಂಶಕ್ಕೆ ಉತ್ತರಾಧಿಕಾರಿಗಳಿಲ್ಲದ ಕಾರಣ ಲಿಚ್ಛವಿ ರಾಜ್ಯವೂ ಸ್ವಾಧೀನಕ್ಕೆ ಬಂತು. ಕುಮಾರದೇವಿಯನ್ನು ಮದುವೆಯಾದ್ದು ಚಂದ್ರಗುಪ್ತನ ಜೀವನದ ಗತಿಯನ್ನೇ ಬದಲಾಯಿಸಿತೆನ್ನಬಹುದು. ಇದರ ಪರಿಣಾಮವಾಗಿ ಇವನ ರಾಜ್ಯ ವಿಸ್ತಾರಗೊಂಡಿತು; ಪ್ರಾಬಲ್ಯ ಹೆಚ್ಚಿತು. ಇವನ ತಂದೆ ಮಹಾರಾಜನೆನಿಸಿಕೊಂಡಿದ್ದ. ಈಗ ಇವನು `ಮಹಾರಾಜಾಧಿರಾಜ` ನೆಂದು ಬಿರುದಾಂಕಿತನಾದ. ಕವಯಿತ್ರಿ ವಿಜ್ಝಿಕಾ ಬರೆದಳೆನ್ನಲಾದ ಕೌಮುದೀಮಹೋತ್ಸವವೆಂಬ ನಾಟಕ ಮಗಧರಾಜ್ಯದ ಅರಸನಾದ ಸುಂದರವರ್ಮನ ದತ್ತುಪುತ್ರನಾದ ಚಂಡಸೇನನನ್ನು ಕುರಿತದ್ದು. ಈತ ಲಿಚ್ಛವಿಯರೊಡಗೂಡಿ ಸುಂದರವರ್ಮನನ್ನು ಕೊಂದು ಮಗಧರಾಜ್ಯವನ್ನು ಆಕ್ರಮಿಸಿದನೆಂಬುದು ನಾಟಕದ ಕಥಾವಸ್ತು. ಇದರಲ್ಲಿಯ ಚಂಡಸೇನನೇ 1ನೆಯ ಚಂದ್ರಗುಪ್ತನೆಂದು ಜಯಸ್ವಾಲ್ ಮುಂತಾದ ಕೆಲವು ವಿದ್ವಾಂಸರು ಊಹಿಸಿದ್ದಾರೆ. ಆದರೆ ಇದರಲ್ಲಿ ತಥ್ಯವಿಲ್ಲ. ಚಂದ್ರಗುಪ್ತ ಲಿಚ್ಛವಿಯರೊಡನೆ ಮಾಡಿದ ಸಂಬಂಧ ಅವನಿಗೆ ಲಾಭದಾಯಕವಾಯಿತೆಂಬುದು ನಿಜ. ಲಿಚ್ಛವಿ ವಂಶದೊಡನೆ ತನ್ನ ಪ್ರಾಮುಖ್ಯವನ್ನು ಸೂಚಿಸಲೆಂಬಂತೆ ಇವನು ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿಸಿದ. ಸಮುದ್ರಗುಪ್ತ ತನ್ನ ಶಾಸನದಲ್ಲಿ ತಾನು ಲಿಚ್ಛವಿ ದೌಹಿತ್ರನೆಂದು ಹೆಮ್ಮೆಯಿಂದ ಕರೆದುಕೊಂಡಿದ್ದಾನೆ. ಇದನ್ನು ಗಮನಿಸಿದಾಗ ಚಂದ್ರ ಗುಪ್ತ ಲಿಚ್ಛವಿಯರಿಂದಲೆ ಪ್ರಾಮುಖ್ಯಕ್ಕೆ ಬಂದನೆಂಬ ಅಂಶ ಸ್ಪಷ್ಟವಾಗುತ್ತದೆ.

	ಚಂದ್ರಗುಪ್ತ ಆಳ್ವಿಕೆಗೆ ಬಂದ ವರ್ಷವಾದ 320ರಿಂದ ಗುಪ್ತರ ಹೆಸರಿನಲ್ಲಿ ಒಂದು ಶಕೆಯನ್ನು ಗಣನೆಗೆ ತರಲಾಯಿತು. ಗುಪ್ತ ಶಕೆಯನ್ನು ಸಮುದ್ರಗುಪ್ತನ ಆಳ್ವಿಕೆಯ ಮೊದಲ ವರ್ಷದಿಂದ ಗಣಿಸಲಾಯಿತೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದು ಚಂದ್ರಗುಪ್ತನ ಆಳ್ವಿಕೆಯ ಮೊದಲ ವರ್ಷದಿಂದಲೇ ಆರಂಭವಾಯಿತೆಂದು ಒಪ್ಪಲಾಗಿದೆ. ಸಮುದ್ರಗುಪ್ತನ ಅಲಾಹಾಬಾದ್ ಸ್ತಂಭಶಾಸನದಲ್ಲಿ ಚಂದ್ರಗುಪ್ತನ ಆಸ್ಥಾನದ ವರ್ಣನೆ ಇದೆ. ತನ್ನ ಆಳ್ವಿಕೆಯ ಕೊನೆಯ ಕಾಲದಲ್ಲಿ ಸಮುದ್ರಗುಪ್ತನೇ ಸಮರ್ಥನಾದ ತನ್ನ ಉತ್ತರಾಧಿಕಾರಿಯೆಂದು ಯೋಚಿಸಿ, ಆಸ್ಥಾನಿಕರ ಸಮ್ಮುಖದಲ್ಲಿ ಚಂದ್ರಗುಪ್ತ ಸಮುದ್ರಗುಪ್ತನನ್ನು ತನ್ನ ಅನಂತರ ರಾಜನಾಗಿ ಆಳಲು ಆರಿಸಿದನೆಂದು ಹೇಳಿದೆ. ಇದರಿಂದ ಬಹುಶಃ ಸಮುದ್ರಗುಪ್ತ ಆತನ ಹಿರಿಯ ಮಗನಾಗಿರದೆ ಅವನ ಹಿರಿಯ ಸೋದರನೊಬ್ಬನಾಗಿದ್ದರೂ ಇರಬಹುದೆಂದು ಊಹೆ ಮಾಡಲಾಗಿದೆ. ಸಮುದ್ರಗುಪ್ತನ ನಾಣ್ಯಗಳನ್ನು ಹೋಲುವ, ಕಾಚಗುಪ್ತನೆಂಬವನ, ಚಿನ್ನದ ನಾಣ್ಯಗಳು ದೊರೆತಿವೆ. ಇವುಗಳ ಆಧಾರದ ಮೇಲೆ ಕಾಚಗುಪ್ತ ಸಮುದ್ರಗುಪ್ತನ ಹಿರಿಯ ಸೋದರನಾಗಿದ್ದಿರಬೇಕೆಂದು ಹಲವರು ಸೂಚಿಸಿದ್ದಾರೆ. ಈ ವಿಷಯದಲ್ಲಿ ನಿಶ್ಚಯವಾಗಿ ಏನನ್ನೂ ಹೇಳಲಿಕ್ಕಾಗುವುದಿಲ್ಲ.

	ಸಮುದ್ರಗುಪ್ತನ ಆಯ್ಕೆ ಅನೇಕ ಸಾಮಂತರಿಗೆ ಸಂತೃಪ್ತಿಯನ್ನುಂಟು ಮಾಡಿತಾದರೂ ಕೆಲವರು ಇದರಿಂದ ಅಸೂಯೆಗೊಂಡರು. ಇವರಲ್ಲಿ ಅಚ್ಯುತ ಮತ್ತು ನಾಗಸೇನರೂ ಕೋಟ ಕುಲದ ಒಬ್ಬ ಸಾಮಂತನೂ ಪ್ರಮುಖರು. ಆದರೆ ಅಧಿಕಾರಕ್ಕೆ ಬಂದ ಕೂಡಲೇ ಸಮುದ್ರಗುಪ್ತ ಇವರೆಲ್ಲರನ್ನೂ ಸೋಲಿಸಿದ. ಇವರು ಸಮುದ್ರಗುಪ್ತನ ವಿರುದ್ಧವಾಗಿ ಅವನ ಹಿರಿಯ ಸಹೋದರನ ಹಕ್ಕನ್ನು ಎತ್ತಿ ಹಿಡಿದರೆಂದು ಹೇಳಲಾಗಿದೆ. ಆದರೆ ಈ ವಿಷಯಗಳನ್ನು ತಿಳಿಸುವ ಶಾಸನದ ಭಾಗ ಹಾಳಾಗಿರುವುದರಿಂದ ಈ ಬಗ್ಗೆ ಯಾವ ನಿರ್ಣಯವನ್ನೂ ನುಡಿಯುಂತಿಲ್ಲ.

	ತದನಂತರ ಸಮುದ್ರಗುಪ್ತ ಉತ್ತರದ ದಿಗ್ವಿಜಯಯಾತ್ರೆ ಕೈಗೊಂಡ. ಈ ಸಂದರ್ಭದಲ್ಲಿ ಇವನು ವಿಶಿಷ್ಟವಾದ ನೀತಿಯನ್ನು ಅವಲಂಬಿಸಿದ. ವಿಶಾಲ ಭಾರತದ ಎಲ್ಲ ಭಾಗಗಳನ್ನೂ ತನ್ನ ನೇರವಾದ ಆಡಳಿತಕ್ಕೊಳಪಡಿಸುವುದು ಕಷ್ಟಸಾಧ್ಯವೆಂಬುದನ್ನು ಅವನು ಅರಿತಿದ್ದಂತೆ ತೋರುತ್ತದೆ. ಆದ್ದರಿಂದಲೇ ಆತ ಉತ್ತರದಲ್ಲಿ ಆಳುತ್ತಿದ್ದ ಅರಸರನ್ನು ಸೋಲಿಸಿ ಅವರ ರಾಜ್ಯಗಳನ್ನು ಮಾತ್ರ ತನ್ನದಕ್ಕೆ ಸೇರಿಸಿಕೊಂಡ. ದಕ್ಷಿಣಾಪಥದ ಅರಸರನ್ನು ಸೋಲಿಸಿದರೂ ಅವರನ್ನು ಬಂಧನದಿಂದ ಮುಕ್ತಗೊಳಿಸಿ ಅವರ ರಾಜ್ಯವನ್ನು ಅವರಿಗೆ ಹಿಂದಿರುಗಿಸಿ, ತನ್ಮೂಲಕ ಅವರು ತನ್ನ ಸಾರ್ವಭೌಮತ್ವವನ್ನು ಒಪ್ಪಿಕೊಂಡು ವಿಧೇಯರಾಗಿರುವಂತೆ ಮಾಡಿದ. ಇವನ ಶಕ್ತಿಸಾಮಥ್ರ್ಯಗಳನ್ನು ಕಂಡ ನೆರೆಹೊರೆಯ ಅರಸರು ಇವನಿಗೆ ಕಪ್ಪಕಾಣಿಕೆಗಳನ್ನು ಸಲ್ಲಿಸಿ ಇವನ ಸ್ನೇಹಕ್ಕಾಗಿ ತಮ್ಮ ಕೈಚಾಚಿದರು.

	ಕವಿ ಹರಿಷೇಣ ಅಲಾಹಾಬಾದ್ ಶಾಸನದಲ್ಲಿ ಸಮುದ್ರಗುಪ್ತನ ದಿಗ್ವಿಜಯಕ್ಕೆ ಸಂಬಂಧಿಸಿದ ಅನೇಕ ವಿವರಣೆಗಳನ್ನು ನೀಡಿದ್ದಾನೆ. ಅದರಂತೆ ಇವನು ಆರ್ಯಾವರ್ತದ ರುದ್ರದೇವ, ಮತಿಲ, ನಾಗದತ್ತ, ಚಂದ್ರವರ್ಮ, ಗಣಪತಿನಾಗ, ನಾಗಸೇನ, ಅಚ್ಯುತ, ನಂದಿ ಮತ್ತು ಬಲವರ್ಮ ಎಂಬ ಅರಸರನ್ನು ಸೋಲಿಸಿ ಅವರ ರಾಜ್ಯವನ್ನು ಸ್ವಾಧೀನಪಡಿಸಿಕೊಂಡ. ಈ ಅರಸರು ಯಾರು? ಇವರು ಆಳುತ್ತಿದ್ದ ರಾಜ್ಯಗಳಾವುವು ಎಂಬುದು ತಿಳಿಯದು. ಇವರ ವಂಶ ಮತ್ತು ಇವರು ಆಳುತ್ತಿದ್ದ ರಾಜ್ಯಗಳನ್ನು ಕುರಿತು ಇತಿಹಾಸಕಾರರು ಹಲವು ಊಹೆಗಳನ್ನು ಮಾಡಿದ್ದಾರೆ. ಅವು ಹೇಗೇ ಇರಲಿ, ಇವರನ್ನು ಸೋಲಿಸಿದ ಪರಿಣಾಮವಾಗಿ ಸಮುದ್ರಗುಪ್ತ ಉತ್ತರಪ್ರದೇಶ, ಮಧ್ಯಭಾರತ, ಪೂರ್ವದಲ್ಲಿ ಬಂಗಾಳ, ಬಿಹಾರ ಮುಂತಾದ ಪ್ರದೇಶಗಳನ್ನೊಳಗೊಂಡ, ಉತ್ತರ ಭಾರತದ ವಿಸ್ತಾರಪ್ರದೇಶದ ಸಾಮ್ರಾಟನಾದ.

	ಅನಂತರ ಸಮುದ್ರಗುಪ್ತ ದಕ್ಷಿಣಾಪಥದ ಕಡೆಗೆ ದಿಗ್ವಿಜಯಕ್ಕಾಗಿ ಹೊರಟ. ಅದಕ್ಕೆ ಮೊದಲು ದಾರಿಯಲ್ಲಿದ್ದ ಎಲ್ಲ ಆಟವಿಕ ರಾಜರನ್ನೂ ತನ್ನ ಅಧೀನರನ್ನಾಗಿ ಮಾಡಿಕೊಂಡ. ಬಹುಶಃ ವಿಂಧ್ಯ ಪರ್ವತದ ಪೂರ್ವಕ್ಕೆ ಬಾಘೇಲಖಂಡ, ರೇವಾ ಮತ್ತು ಛೋಟಾನಾಗಪುರಗಳನ್ನೊಳಗೊಂಡ ಅಡವಿ ಪ್ರದೇಶದಲ್ಲಿ ಈ ರಾಜರು ಆಳುತ್ತಿದ್ದು ಬಹಳ ಕಿರುಕುಳ ನೀಡುತ್ತಿದ್ದಿರಬೇಕು.

	ದಕ್ಷಿಣಾಪಥದ ಅರಸರ ವಿಷಯದಲ್ಲಿ ಸಮುದ್ರಗುಪ್ತನದು ಗ್ರಹಣ, ಮೋಕ್ಷ ಮತ್ತು ಅನುಗ್ರಹ ನೀತಿಯಾಗಿತ್ತು. ಮೇಲೆ ಹೇಳಿದಂತೆ ಅವರ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳದೆ, ಅವರನ್ನು ಸೋಲಿಸಿದ ಬಳಿಕ ಬಿಡುಗಡೆ ಮಾಡಿ, ಅವರ ರಾಜ್ಯದಲ್ಲಿ ಅವರನ್ನು ಪುನಃ ಸ್ಥಾಪಿಸಿ ಅವರನ್ನು ತನ್ನ ವಿಧೇಯರಾದ ಸಾಮಂತರನ್ನಾಗಿ ಮಾಡಿಕೊಂಡ. ಇದು ಅವನ ರಾಜನೀತಿ ಚತುರತೆಯನ್ನು ಸೂಚಿಸುತ್ತದೆ. ಈ ವಿಷಯವನ್ನು ಪ್ರಸ್ತಾಪಿಸುವಾಗ ಕವಿಗಳು ಸಮುದ್ರಗುಪ್ತ ಸೋಲಿಸಿದ ರಾಜರ ಹೆಸರುಗಳನ್ನೇ ಅಲ್ಲದೆ ಅವರು ಆಳುತ್ತಿದ್ದ ರಾಜ್ಯಗಳ ಹೆಸರುಗಳನ್ನೂ ಸೂಚಿಸಿದ್ದಾರೆ. ಅವರು ಹನ್ನೆರಡು ಮಂದಿ ಅರಸರು. ಹರಿಷೇಣನ ಶಾಸನದಲ್ಲಿ ಹೇಳಿರುವ ಪ್ರಕಾರ ಅವರ ಹೆಸರು ಮತ್ತು ರಾಜ್ಯಗಳು ಹೀಗಿವೆ; ಕೋಸಲದ ಮಹೇಂದ್ರ, ಮಹಾಕಾಂತಾರದ ವ್ಯಾಘ್ರರಾಜ, ಕೌರಾಲದ ಮಂಟರಾಜ, ಪಿಷ್ಠಿಪುರದ ಮಹೇಂದ್ರ, ಗಿರಿಕೊಟ್ಟೂರಿನ ಸ್ವಾಮಿದತ್ತ, ಏರಂಡಪಲ್ಲಿಯ ದಮನ, ಕಂಚಿಯ ವಿಷ್ಣುಗೋಪ, ಅವಮುಕ್ತದ ನೀಲರಾಜ, ವೆಂಗಿಯ ಹಸ್ತಿವರ್ಮ, ಪಾಲಕ್ಕದ ಉಗ್ರಸೇನ, ದೇವರಾಷ್ಟ್ರದ ಕುಬೇರ ಮತ್ತು ಕೌಸ್ಥಲಪುರದ ಧನಂಜಯ. ಇಲ್ಲಿ ಹೆಸರಿಸಿರುವ ರಾಜ್ಯಗಳಲ್ಲಿ ಮಹಾಕಾಂತಾರ, ಅವಮುಕ್ತ, ಕೌಸ್ಥಲಪುರ ರಾಜ್ಯಗಳು ಯಾವುವು ಎಂಬುದು ಇನ್ನೂ ತಿಳಿದಿಲ್ಲ. ಕೌರಾಳ ಎಂಬುದನ್ನು ಕೇರಲ ಎಂದು ಓದಿ, ಮಂಟರಾಜನನ್ನು ಕೇರಳದ ದೊರೆಯಾಗಿ ಕೆಲವರು ಮಾಡಿದ್ದಾರೆ. ಪಾಲಕ್ಕ ಎಂಬುದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಪಾಲಕ್ಕಡ ಎಂದು ಕೆಲವರೂ ಕೇರಳದ ಪಾಲಕ್ಕಾಡು ಎಂದು ಇತರರೂ ಸೂಚಿಸಿದ್ದಾರೆ. ಅಂತೆಯೇ ದೇವರಾಷ್ಟ್ರ ವಿಶಾಖಪಟ್ಟಣದ ಎಲಮಂಚಲಿ ಎಂದು ಕೆಲವರೆಂದರೆ, ಇನ್ನು ಕೆಲವರು ಇದನ್ನು ಮಹಾರಾಷ್ಟ್ರವೆನ್ನುತ್ತಾರೆ. ಏರಂಡಪಲ್ಲಿ ಸಹ ವಿಶಾಖಪಟ್ಟಣ ಜಿಲ್ಲೆಯ ಅದೇ ಹೆಸರಿನ ಗ್ರಾಮ. ಆದರೆ ಇದು ಮಹಾರಾಷ್ಟ್ರದ ಖಾನ್‍ದೇಶ ಜಿಲ್ಲೆಯ ಏರಂಡೋಲ್ ಎಂದ ಕೆಲವು ಇತಿಹಾಸಕಾರರು ವಾದಿಸಿದ್ದಾರೆ. ಇಲ್ಲಿ ಸೂಚಿಸಿರುವ ರಾಜ್ಯಗಳೆಲ್ಲ ಪೂರ್ವತೀರದಲ್ಲಿಯೇ ಇದ್ದ ಪ್ರದೇಶಗಳು ಎನ್ನುವುದಾದಲ್ಲಿ ಸಮುದ್ರಗುಪ್ತ ಕೇವಲ ಪೂರ್ವ ತೀರದ ತುದಿಯವರೆಗೂ ಬಂದು, ಅದೇ ಮಾರ್ಗವಾಗಿ ಹಿಂದಿರುಗಿದನೆಂದು ಹೇಳಬೇಕಾಗುತ್ತದೆ. ಆದರೆ ಇನ್ನು ಕೆಲವರು ಸೂಚಿಸಿರುವಂತೆ ಈ ರಾಜ್ಯಗಳಲ್ಲಿ ಕೆಲವು ಕೇರಳ ಮತ್ತು ಈಗಿನ ಮಹಾರಾಷ್ಟ್ರಗಳಲ್ಲಿಯೂ ಇದ್ದುವು ಎನ್ನುವ ಪಕ್ಷದಲ್ಲಿ ಸಮುದ್ರಗುಪ್ತ ಪೂರ್ವ ತೀರದ ರಾಜ್ಯಗಳಿಂದಾರಂಭಿಸಿ ದಕ್ಷಿಣದ ತುದಿಯಲ್ಲಿದ್ದ ಚೇರರ ರಾಜ್ಯದಲ್ಲಿ ತನ್ನ ಸಾರ್ವಭೌಮತ್ವವನ್ನು ಸ್ಥಿರೀಕರಿಸಿ ಪಶ್ಚಿಮಕ್ಕೆ ತಿರುಗಿ ಮಹಾರಾಷ್ಟ್ರದ ಮೂಲಕ ತನ್ನ ರಾಜಧಾನಿಗೆ ಹಿಂದಿರುಗಿದನೆಂದು ಊಹಿಸಬೇಕಾಗುತ್ತದೆ.

	ಇವನ ಈ ದಿಗ್ವಿಜಯದಿಂದ ಭೀತಿಗೊಂಡು, ಸರಹದ್ದಿನ ಸಮತಟ, ಡವಾಕ, ಕಾಮರೂಪ, ನೇಪಾಳ ಮತ್ತು ಕರ್ತೃಪುರದ ಅರಸರು ಶರಣಾದರೆಂದು ಶಾಸನ ಹೇಳುತ್ತದೆ. ಡವಾಕ ಮತ್ತು ಕರ್ತೃಪುರಗಳನ್ನು ಗುರುತಿಸಲಾಗಿಲ್ಲ. ಉಳಿದ ಪ್ರದೇಶಗಳು ಈಗಿನ ಬಂಗಾಳ, ಅಸ್ಸಾಮಿನ ಉತ್ತರಭಾಗ ಮತ್ತು ನೇಪಾಳ ಪ್ರದೇಶಗಳನ್ನೊಳಗೊಂಡಿದ್ದುವು. ಇವಲ್ಲದೆ ಮಾಲದ, ಅರ್ಜುನಾಯನ, ಯೌಧೇಯ, ಮುದ್ರಕ, ಅಭೀರ, ಪ್ರಾರ್ಜುನ, ಸನಕಾನೀಕ, ಕಾಕ ಮತ್ತು ಖರಪಲಿಕ ಎಂಬ ಜನಾಂಗಗಳ ಅಧಿಪತಿಗಳು ಸಹ ತಮ್ಮ ವಿಧೇಯತೆಯನ್ನು ಸೂಚಿಸಿದರು. ಇವುಗಳಿಂದೆಲ್ಲ ನಮಗೆ ಸ್ಥೂಲವಾಗಿ ಸಮುದ್ರಗುಪ್ತನ ರಾಜ್ಯದ ವೈಶಾಲ್ಯ ತಿಳಿದುಬರುತ್ತದೆ. ಪಶ್ಚಿಮದಲ್ಲಿ ಪಂಜಾಬಿನಿಂದ ಪೂರ್ವದಲ್ಲಿ ಬಂಗಾಳದವರೆಗೂ ಉತ್ತರದ ಹಿಮಾಲಯದಿಂದ ದಕ್ಷಿಣದ ವಿಂಧ್ಯ ಪರ್ವತದ ವರೆಗೂ ಸ್ಥೂಲವಾಗಿ ಸಕಲ ಉತ್ತರಾಪಥ ಸಮುದ್ರಗುಪ್ತನ ನೇರ ಆಡಳಿತಕ್ಕೆ ಒಳಪಟ್ಟಿತ್ತು. ಅಳಿದುಳಿದ ಕುಷಾಣ, ಶಕ, ಮುರುಂಡ ಮುಂತಾದ ಜನಾಂಗಗಳಿಗೆ ಸೇರಿದವರೂ ಸಿಂಹಳದ ಅರಸನೂ ತಮ್ಮ ಕಪ್ಪಕಾಣಿಕೆಗಳನ್ನು ಸಲ್ಲಿಸಿದರು.

	ಅಲಾಹಾಬಾದ್ ಶಾಸನದಲ್ಲಿ ಸಮುದ್ರಗುಪ್ತ ಅಶ್ವಮೇಧಯಾಗವನ್ನು ಮಾಡಿದ ಬಗ್ಗೆ ಉಲ್ಲೇಖವಿಲ್ಲ. ಸಮುದ್ರಗುಪ್ತನ ಕೀರ್ತಿ ಭೂಮಿಯನ್ನೆಲ್ಲ ವ್ಯಾಪಿಸಿ ಸ್ವರ್ಗಕ್ಕೂ ಏರಿತು ಎಂದು ಸೂಚಿಸುವ ಶಾಸನಪದ್ಯದ ಆಧಾರದಿಂದ ಈ ಶಾಸನ ಸಮುದ್ರಗುಪ್ತನ ಮರಣಾನಂತರ ಅಸ್ತಿತ್ವಕ್ಕೆ ಬಂತೆಂದು ಒಂದು ಕಾಲದಲ್ಲಿ ಊಹಿಸಲಾಗಿತ್ತು. ಆದರೆ ಅದು ಸರಿಯಲ್ಲವೆಂದು ಈಗ ಸ್ಥಿರಪಟ್ಟಿದೆ. ಸಮುದ್ರಗುಪ್ತ ಅಶ್ವಮೇಧಯಾಗ ಮಾಡಿದ ಕುರುಹಾಗಿ ನಾಣ್ಯವೊಂದನ್ನು ಅಚ್ಚುಹಾಕಿಸಿದ. ಬಹಳ ದಿನಗಳಿಂದ ನಿಂತುಹೋಗಿದ್ದ ಈ ಯಜ್ಞಯಾಗಾದಿಗಳನ್ನು ಪುನರಾರಂಭಿಸಿದ ಕೀರ್ತಿ ಇವನಿಗೂ ಇವನ ಅನಂತರದವರಿಗೂ ಸಲ್ಲುತ್ತದೆಂದು ಗುಪ್ತರ ಶಾಸನದಲ್ಲಿಯೇ ಹೇಳಲಾಗಿದೆ. ಅಂದಮೇಲೆ ಅಲಾಹಾಬಾದ್ ಸ್ತಂಭಶಾಸನ ಸಮುದ್ರಗುಪ್ತನ ದಿಗ್ವಿಜಯದ ಅನಂತರ, ಆದರೆ ಅಶ್ವಮೇಧಯಾಗ ಮಾಡುವ ಮೊದಲು ಕೆತ್ತಿಸಿದ್ದಿರಬೇಕು.

	ಈ ಶಾಸನವನ್ನು ಕಾವ್ಯವೆಂದು ವರ್ಣಿಸಲಾಗಿದೆ. ಇದರ ಕರ್ತೃ ಮಹಾದಂಡನಾಯಕ ಧ್ರುವಭೂತಿಯ ಮಗ ಸಂಧಿವಿಗ್ರಹಿ ಕುಮಾರಾಮಾತ್ಯ, ಮಹಾದಂಡನಾಯಕ ಹರಿಷೇಣ. ಸಮುದ್ರಗುಪ್ತ ಸ್ವತಃ ಅನೇಕ ಕಾವ್ಯಗಳನ್ನು ರಚಿಸುವುದರ ಮೂಲಕ ಕವಿರಾಜನೆಂಬ ಪ್ರಶಸ್ತಿಗೆ ಅರ್ಹನಾಗಿದ್ದನೆಂದೂ ಸಂಗೀತಶಾಸ್ತ್ರದಲ್ಲಿ ತುಂಬುರುವನ್ನು ಮೀರಿಸಿದ್ದನೆಂದೂ ಶಾಸನದಲ್ಲಿ ಹೇಳಿದೆ. ಅವನ ಯಾವ ಕಾವ್ಯಗಳು ಲಭ್ಯವಾಗಿಲ್ಲ. ಆದರೆ ಅವನು ಸಂಗೀತ ಶಾಸ್ತ್ರಜ್ಞನೆಂಬ ವಿಷಯವನ್ನು ಅವನು ಅಚ್ಚು ಹಾಕಿಸಿದ ಕೆಲವು ನಾಣ್ಯಗಳು ಸಮರ್ಥಿಸುತ್ತವೆ. ಸಮುದ್ರಗುಪ್ತ ತಾನೇ ವೀಣೆಯನ್ನು ನುಡಿಸುತ್ತಿರುವಂತೆ ಈ ನಾಣ್ಯಗಳಲ್ಲಿ ಚಿತ್ರಿಸಲಾಗಿದೆ.

	ಸಮುದ್ರಗುಪ್ತನನ್ನು ಕೆಲವು ಇತಿಹಾಸಕಾರರು ಭಾರತದ ನೆಪೋಲಿಯನ್ ಎಂದು ಕರೆದಿದ್ದಾರೆ. ಆದರೆ ಈ ಹೋಲಿಕೆ ಸಮಂಜಸವಾಗಿಲ್ಲ. ನೆಪೋಲಿಯನನಿಗೆ ಅತೀವವಾದ ರಾಜ್ಯದಾಹವಿತ್ತು. ತನ್ನ ಹಿರಿಮೆಯಲ್ಲಿ ಬಹಳವಾದ ನಂಬಿಕೆಯಿತ್ತು. ಆದರೆ ಸಮುದ್ರಗುಪ್ತನ ಕೈಗೊಂಡ ದಿಗ್ವಿಜಯ ಯಾತ್ರೆಯನ್ನು ಗಮನಿಸಿದಾಗ, ಅದರಲ್ಲಿಯೂ ಅವನು ದಕ್ಷಿಣಾಪಥದ ಅರಸುಗಳ ವಿಷಯದಲ್ಲಿ ಅನುಸರಿಸಿದ ನೀತಿಯನ್ನು ಕಂಡಾಗ ಅವನಿಗೆ ರಾಜ್ಯದಾಹವಿರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ. 

	ಸಮುದ್ರಗುಪ್ತ ಸು. 380ರ ವರೆಗೂ ಆಳಿದ. ಗುಪ್ತ ಶಕೆಯನ್ನು 1ನೆಯ ಚಂದ್ರಗುಪ್ತನ ಆಳ್ವಿಕೆಯಿಂದ ಗಣಿಸಿದಲ್ಲಿ ಸಮುದ್ರಗುಪ್ತನ ಬಹುಶಃ 340 ಅಥವಾ 345ರ ವೇಳೆಗೆ ಪಟ್ಟಕ್ಕೆ ಬಂದನೆಂದು ಗೊತ್ತಾಗುತ್ತದೆ. ಎಂದರೆ ಇವನು ಸುಮಾರು 35-40 ವರ್ಷಗಳ ಕಾಲ ಆಳಿದ.

	ಸಮುದ್ರಗುಪ್ತನ ಅನಂತರ ಇಮ್ಮಡಿ ಚಂದ್ರಗುಪ್ತ ಪಟ್ಟಕ್ಕೆ ಬಂದ. ಇವನಿಗೆ ರಾಮಗುಪ್ತನೆಂಬ ಹಿರಿಯ ಸಹೋದರನಿದ್ದನೆಂದೂ ಸಮುದ್ರಗುಪ್ತನ ಅನಂತರ ಅವನೇ ಒಂದೆರಡು ವರ್ಷ ಆಳಿದನೆಂದು ಆದರೆ ಅವನ ಕಾಲದಲ್ಲಿ ಸಾಮ್ರಾಜ್ಯ ಶಕರ ದಾಳಿಗೆ ತುತ್ತಾಗಿ ಅವನು ಸೋಲನ್ನು ಅನುಭವಿಸಬೇಕಾಗಿ ಬಂದಾಗ ಅವನಿಗಿಂತ ಹೆಚ್ಚು ದಕ್ಷನೂ ಪರಾಕ್ರಮಶಾಲಿಯೂ ಅವನಿಗಿಂತ ಕಿರಿಯನೂ ಆದ ಚಂದ್ರಗುಪ್ತ ದೇಶದ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡು ಶಕರನ್ನು ಹೊರದೂಡಿದನೆಂದೂ ಕೆಲವರು ಇತಿಹಾಸಕಾರರು ಹೇಳಿದ್ದಾರೆ. ರಾಮಗುಪ್ತನೆಂಬ ಅರಸನ ನಾಣ್ಯಗಳು ದೊರೆತಿರುವುದೂ ವಿಶಾಖದತ್ತ ಬರೆದುದೆನ್ನಲಾದ ದೇವೀಚಂದ್ರಗುಪ್ತ ಎಂಬ ನಾಟಕದ ಕಥೆಯೂ ಈ ಊಹೆಗೆ ಪ್ರಮುಖ ಆಧಾರಗಳಾಗಿವೆ. ಇತ್ತೀಚೆಗೆ ರಾಮಗುಪ್ತನ ಎರಡು ಶಾಸನಗಳು ಲಭ್ಯವಾಗಿವೆ. ಈ ಶಾಸನಗಳಿಂದ ಅವನು ಗುಪ್ತವಂಶಕ್ಕೆ ಸೇರಿದವನೆಂಬುದಾಗಿ ಹೇಳಲಾಗಿದೆ. ರಾಮಗುಪ್ತನ ಆಳ್ವಿಕೆಯ ಬಗೆಗೆ ಈಗಲೂ ಸಂದೇಹವಿದ್ದೇ ಇದೆಯಾದರೂ ಇವನ ಅಸ್ತಿತ್ವವಂತೂ ಖಚಿತವಾಗಿದೆ.

	ಎರಡನೆಯ ಚಂದ್ರಗುಪ್ತನ ಆಳ್ವಿಕೆಯ ಕಾಲದಲ್ಲಿ ಗುಪ್ತರ ಸಾಮ್ರಾಜ್ಯ ಔನ್ನತ್ಯಕ್ಕೆ ಏರಿತು. ಇವನ ತಾಯಿ ದತ್ತಾದೇವಿ. ಇವನಿಗೆ ದೇವಗುಪ್ತ. ದೇವರಾಜ, ದೇವಶ್ರೀ ಎಂಬ ಬಿರುದುಗಳು ಇದ್ದುವು. ಇವನಿಗೆ ಇಬ್ಬರು ಪತ್ನಿಯರು; ಧ್ರುವದೇವಿ ಮತ್ತು ಕುಬೇರನಾಗ. 380ರ ವೇಳೆಗೆ ರಾಜ್ಯವಾಳತೊಡಗಿದ ಈತನೂ ಸುಮಾರು 35 ವರ್ಷಗಳಷ್ಟು ಕಾಲ ಆಳಿದ.

	ಇವನ ತಂದೆಯ ಕಾಲದಲ್ಲಿ ಶಕ ಮತ್ತು ಕುಷಾಣ ವಂಶಗಳಿಗೆ ಸೇರಿದ ಕೆಲವು ಸಾಮಂತರು ಸಮುದ್ರಗುಪ್ತನಿಗೆ ಕಪ್ಪಕಾಣಿಕೆಗಳನ್ನು ಸಲ್ಲಿಸಿದರೆಂದು ಮೇಲೆ ಹೇಳಿದೆ. ಆ ವಂಶದ ಅರಸರನ್ನು ಸಂಪೂರ್ಣವಾಗಿ ಸೋಲಿಸಿ, ಹೊಡಿದೋಡಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ತಂದೆಯಂತೆಯೇ ಇವನೂ ಕದನಗಳಲ್ಲಿ ಚತುರ. ತಂದೆಯಿಂದ ಪಡೆದ ರಾಜ್ಯವನ್ನು ಇವನು ಮತ್ತಷ್ಟು ವಿಸ್ತಾರಗೊಳಿಸಿ, ತನ್ನ ಸಾಮ್ರಾಜ್ಯದಲ್ಲಿ ಸುಭದ್ರವಾದ ಆಡಳಿತವಿರುವಂತೆ ಮಾಡಿದ. ಗುಜರಾತ್ ಮತ್ತು ಕಾಠಿಯಾವಾಡದ ಶಕ ಅರಸು ಇವನ ಮುಖ್ಯ ಶತ್ರು. ಅವನನ್ನು ಸೋಲಿಸಿ ಅವನ ರಾಜ್ಯವನ್ನು ವಶಪಡಿಸಿಕೊಳ್ಳುವುದಕ್ಕಾಗಿ ಇವನು ಪ್ರಾರಂಭದಿಂದಲೂ ವಿಸ್ತøತವಾದ ಯೋಜನೆಯನ್ನು ಹಾಕಿಕೊಂಡ. ಅದಕ್ಕೆಂದೇ ಇವನು ಇತರ ಹಿಂದೂ ಅರಸುಮನೆತನಗಳೊಡನೆ ರಕ್ತಸಂಬಂಧ ಬೆಳೆಸಿದ. ಇವನ ಪತ್ನಿಯಾದ ಕುಬೇರನಾಗಳು ನಾಗವಂಶಕ್ಕೆ ಸೇರಿದವಳು. ಇವಳಿಂದ ಇವನಿಗೆ ಪ್ರಭಾವತೀಗುಪ್ತಳೆಂಬ ಮಗಳು ಹುಟ್ಟಿದಳು. ಇವಳನ್ನು ವಾಕಾಟಕ ವಂಶದ ಇಮ್ಮಡಿ ರುದ್ರಸೇನನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಭೌಗೋಳಿಕವಾಗಿ ವಾಕಾಟಕರ ಮತ್ತು ನಾಗರ ರಾಜ್ಯಗಳು ಇವನ ರಾಜ್ಯದ ಮೇರೆಗಳಾಗಿದ್ದುವು. ಶಕರೊಡನೆ ಇವನು ಕಾದುವಾಗ ವಾಕಾಟಕರ ಬೆಂಬಲವಿಲ್ಲದಿದ್ದಲ್ಲಿ ನಾಗರು ಸುಲಭವಾಗಿ ಇವನ ರಾಜ್ಯದ ಮೇಲೆ ನುಗ್ಗಬಹುದಾಗಿತ್ತು. ಎಂತಲೇ ವಾಕಾಟಕರೊಡನೆ ಸ್ನೇಹ ಇವನಿಗೆ ಬಹಳವಾಗಿ ಬೇಕಾಗಿತ್ತು.

	ಇವನ ಅಳಿಯನಾದ ರುದ್ರಸೇನ ಬಹುಕಾಲ ಆಳದೆ ಮರಣ ಹೊಂದಿದ. ಅವನಿಗೆ ದಿವಾಕರಸೇನ ಮತ್ತು ದಾಮೋದರಸೇನ ಎಂಬ ಇಬ್ಬರು ಮಕ್ಕಳಿದ್ದರು. ಅವರು ಇನ್ನೂ ಕಿರಿಯರಾಗಿದ್ದ ಕಾರಣ ಚಂದ್ರಗುಪ್ತನ ಸಲಹೆಯ ಮೇರೆಗೆ ಪ್ರಭಾಪತೀಗುಪ್ತಳು ತನ್ನ ಮಕ್ಕಳ ಹೆಸರಿನಲ್ಲಿ ತಾನೇ ರಾಜ್ಯಭಾರ ಮಾಡತೊಡಗಿದಳು. ಈ ಸಂದರ್ಭದಲ್ಲಿ ವಾಕಾಟಕರ ರಾಜ್ಯವನ್ನು ಚಂದ್ರಗುಪ್ತ ಸ್ವಾಧೀನಪಡಿಸಿಕೊಳ್ಳಬಹುದಿತ್ತು. ಆದರೆ ಅದರಿಂದ ಶಕರನ್ನು ಹೊಡೆದಟ್ಟುವ ಅವನ ಮನೋರಥ ಈಡೇರುತ್ತಿರಲಿಲ್ಲ. ಕರ್ನಾಟಕದಲ್ಲಿಯ ಕದಂಬ ವಂಶದ ಕಾಕುತ್ಸವರ್ಮ ತನ್ನ ಹೆಚ್ಚು ಮಕ್ಕಳನ್ನು ಗುಪ್ತರಿಗೂ ಇತರ ಅರಸರಿಗೂ ಮದುವೆ ಮಾಡಿಕೊಟ್ಟಿದ್ದುದಾಗಿ ಅವನ ಒಂದು ಶಾಸನದಲ್ಲಿ ಹೇಳಿದೆ. ಈ ರಾಜಕುಮಾರಿ ಇಮ್ಮಡಿ ಚಂದ್ರಗುಪ್ತನನ್ನೋ ಅವನ ಮಗನನ್ನೋ ಬಹುಶಃ ಮದುವೆಯಾಗಿರಬೇಕು. ಇಷ್ಟೆಲ್ಲ ಪೂರ್ವ ಸಿದ್ಧತೆಗಳ ಬಳಿಕ ಚಂದ್ರಗುಪ್ತ ಶಕರ ಮೇಲೆ ದಂಡೆತ್ತಿ ಹೋದ. ಆಗ ಇವನ ಉದ್ದೇಶ ಈಡೇರಿ ಮಾಳವ, ಗುಜರಾತ್, ಕಾಠಿಯಾವಾಡ ಪ್ರದೇಶಗಳು ಇವನ ಸ್ವಾಧೀನಕ್ಕೆ ಬಂದುವು. ಈತನಿಗೆ ಶಕಾರಿ ಎಂಬ ಬಿರುದಿರುವುದು ಗಮನಾರ್ಹ.

	ದೆಹಲಿಯ ಬಳಿಯ ಮೆಹ್‍ರೌಲಿ ಗ್ರಾಮದಲ್ಲಿರುವ ಕಬ್ಬಿಣದ ಸ್ತಂಭಶಾಸನದಲ್ಲಿ ಚಂದ್ರನೆಂಬ ಅರಸನೊಬ್ಬ ಸಿಂಧೂ ನದಿಯನ್ನು ದಾಟಿ ವಾಲ್ಹಿಕ ದೇಶವನ್ನು ಸ್ವಾಧೀನಪಡಿಸಿಕೊಂಡನೆಂದೂ ವಂಗ ದೇಶದಲ್ಲಿಯ ಶತ್ರುಗಳನ್ನು ಸೋಲಿಸಿದನೆಂದೂ ಹೇಳಲಾಗಿದೆ. ವಾಲ್ಹಿಕ ಎಂಬುದು ಬ್ಯಾಕ್ಟ್ರಿಯ ದೇಶ. ವಂಗ ಪೂರ್ವ ಬಂಗಾಳ. ಇದನ್ನೇ ಸಮತಟ ಎಂದು ಕರೆಯಲಾಗಿತ್ತು. ಇಲ್ಲಿಯ ಅರಸರು ಸಮುದ್ರಗುಪ್ತನಿಗೆ ಕಷ್ಟವನ್ನು ಕೊಡುತ್ತಿದ್ದರೆಂದು ಹಿಂದೆಯೇ ಹೇಳಿದೆ. ಮೆಹ್‍ರೌಲಿ ಶಾಸನದ ಅರಸನಾದ ಚಂದ್ರ ಯಾರು ಎಂಬ ಬಗೆಗೆ ವಿವಾದಗಳಿವೆ. ಆದರೆ ಇವನು ಗುಪ್ತವಂಶದ ಇಮ್ಮಡಿ ಚಂದ್ರಗುಪ್ತನೆಂದು ಈಗ ಸಾಮಾನ್ಯವಾಗಿ ಒಪ್ಪಲಾಗಿದೆ. ಇದು ನಿಜವಿದ್ದಲ್ಲಿ ಸಮಗ್ರ ಉತ್ತರ ಭಾರತ ಚಂದ್ರಗುಪ್ತನ ಸ್ವಾಧೀನಕ್ಕೆ ಬಂದಿತೆಂಬುದರಲ್ಲಿ ಸಂದೇಹವಿಲ್ಲ.

	ಗುಪ್ತ ಸಾಮ್ರಾಜ್ಯಕ್ಕೆ ಭದ್ರವಾದ ಅಡಿಪಾಯ ಹಾಕಿದವನು ಸಮುದ್ರಗುಪ್ತನಾದರೆ, ಆ ತಳಹದಿಯ ಮೇಲೆ ಭವ್ಯವಾದ ಕಟ್ಟಡ ಕಟ್ಟಿದವನು ಇಮ್ಮಡಿ ಚಂದ್ರಗುಪ್ತ. ಇವನ ಕಾಲದಲ್ಲಿ ಪಾಟಲೀಪುತ್ರವೇ ರಾಜಧಾನಿಯಾಗಿದ್ದರೂ ಉಜ್ಜಯಿನಿಯೂ ಅಷ್ಟೇ ಪ್ರಾಮುಖ್ಯ ಪಡೆಯಿತು. ವಿಕ್ರಮಾದಿತ್ಯನೆಂದು ಬಿರುದಾಂಕಿತನಾದ ಈ ಚಂದ್ರಗುಪ್ತನೇ ಪೌರಾಣಿಕ ಖ್ಯಾತಿಯನ್ನು ಪಡೆದ ಉಜ್ಜಯಿನಿಯ ಅರಸನಾದ ವಿಕ್ರಮಾದಿತ್ಯನೆಂದು ಹೇಳಲಾಗಿದೆ. ಚಂದ್ರಗುಪ್ತನ ಶಾಸನಗಳಲ್ಲಿ ಬಹುಭಾಗ ದೊರೆತಿರುವುದು ಮಾಳವ ದೇಶದಲ್ಲಿ. ಬಹುಶಃ ಉಜ್ಜಯಿನಿಯಲ್ಲಿಯೇ ಈ ಅರಸ ಹೆಚ್ಚು ಕಾಲ ವಾಸಿಸಿರಬಹುದು. ಅಯೋಧ್ಯೆ ಸಹ ಇವನ ಮತ್ತೊಂದು ನೆಲೆವೀಡಾಗಿತ್ತು. ತಂದೆಯಿಂದ ಪಡೆದ ರಾಜ್ಯವನ್ನು ವಿಸ್ತರಿಸಿದ ಶ್ರೇಯಸ್ಸು ಈತನಿಗೆ ಸಲ್ಲುತ್ತದೆ. ಶಕರನ್ನು ಹಿಮ್ಮೆಟ್ಟಿಸಿ ಶಕಾರಿ ಎಂಬ ಅನ್ವರ್ಥ ನಾಮವನ್ನು ಪಡೆದ ಇಮ್ಮಡಿ ಚಂದ್ರಗುಪ್ತನ ರಾಜ್ಯದಲ್ಲಿ ಶಾಂತಿ, ಸುಭಿಕ್ಷೆ ನೆಲಸಿದ್ದುವು. ಎಂತಲೇ ಈತ ಸಾಹಿತಿಗಳಿಗೂ ಕವಿಗಳಿಗೂ ಕಲಾಕಾರರಿಗೂ ಆಶ್ರಯದಾತನಾಗಿದ್ದ ಇಮ್ಮಡಿ ಚಂದ್ರಗುಪ್ತ 380ರಿಂದ 415ರವರಗೆ ಸುಮಾರು 35 ವರ್ಷಗಳ ಕಾಲ ಆಳಿದ.

	ಚಂದ್ರಗುಪ್ತನ ಬಳಿಕ ಅವನ ಮಗನಾದ ಕುಮಾರಗುಪ್ತ ಪಟ್ಟಕ್ಕೆ ಬಂದ. ಈತ ಪಟ್ಟಮಹಿಷಿಯಾದ ಧ್ರುವದೇವಿಯ ಮಗ. ಸುಮಾರು 415ರಲ್ಲಿ ಪಟ್ಟಕ್ಕೆ ಬಂದ ಈತ ನಲವತ್ತು ವರ್ಷಗಳ ಕಾಲ, ಸುಮಾರು 455ರವರಗೆ, ರಾಜ್ಯವಾಳಿದ. ಕುಮಾರಗುಪ್ತನದು ಶಾಂತಿ ಸುಭಿಕ್ಷೆಗಳ ಕಾಲ. ದೀರ್ಘಕಾಲ ಅಳಿದ ಆತ ಪೂರ್ವಜರಿಂದ ಪಡೆದ ವಿಸ್ತಾರವಾದ ರಾಜ್ಯವನ್ನು ಕಾಪಾಡಿಕೊಂಡು ಬಂದ. ಇದಕ್ಕೆ ಅವನ ದಕ್ಷ ಆಡಳಿತವೂ ಕಾರಣ. ಮಹೇಂದ್ರಾದಿತ್ಯನೆಂಬ ಬಿರುದು ಹೊಂದಿದ್ದ ಈತ ಅಶ್ವಮೇಧಯಾಗ ಮಾಡಿದ. ಸ್ವಾಮಿ ಕಾರ್ತಿಕೇಯನ ಚಿತ್ರವುಳ್ಳ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿಸಿದ. ಬೆಳ್ಳಿಯ ನಾಣ್ಯಗಳ ಮೇಲೆ ಗರುಡನ ಚಿತ್ರಕ್ಕೆ ಬದಲು ನವಿಲಿನ ಚಿತ್ರವನ್ನು ಅಚ್ಚುಹಾಕಿಸಿದ. ಇವನ ಅಧೀನದಲ್ಲಿದ್ದ ಅನೇಕ ಮಾಂಡಲಿಕರ ಹಾಗೂ ಇತರ ಅಧಿಕಾರಿಗಳ ವಿವರಗಳು ತಿಳಿದಿವೆ.

	ಆದರೆ ಇವನ ರಾಜ್ಯಭಾರಕಾಲದ ಕೊನೆಯ ವರ್ಷಗಳಲ್ಲಿ ರಾಜ್ಯಕ್ಕೆ ಶತ್ರುಬಾಧೆಯಿಂದ ಗಂಡಾಂತರವೊದಗಿತು. ಆ ಶತ್ರುಗಳು ಯಾರು ಎಂಬುದನ್ನು ಕುರಿತು ವಿವಾದಗಳಿವೆ. ಅವರು ಯಾರೇ ಆಗಿದ್ದಿರಲಿ, ಅವರಿಂದ ರಾಜ್ಯಕ್ಕೆ ತೀವ್ರವಾದ ಹಾನಿಯುಂಟಾಯಿತು. ಆದರೂ ಇಂಥ ಸಂದರ್ಭದಲ್ಲಿ ರಾಜಕುಮಾರ ಸ್ಕಂದಗುಪ್ತ ಶತ್ರುವನ್ನು ಧೈರ್ಯದಿಂದ ಎದುರಿಸಿ ಹಿಮ್ಮೆಟ್ಟಿಸಿದ. ಗುಪ್ತ ಸಾಮ್ರಾಜ್ಯವನ್ನು ರಕ್ಷಿಸುವುದರಲ್ಲಿ ಸ್ಕಂದಗುಪ್ತ ವಿಶಿಷ್ಟ ಪಾತ್ರವಹಿಸಿದ. ಸ್ಕಂದಗುಪ್ತ ಶತ್ರುಗಳನ್ನೋಡಿಸುತ್ತಿದ್ದಾಗಲೇ ಕುಮಾರಗುಪ್ತ ಮರಣಹೊಂದಿದ.

	ಕುಮಾರಗುಪ್ತನ ಅನಂತರ ಸ್ಕಂದಗುಪ್ತ 455-56ರಲ್ಲಿ ಪಟ್ಟಕ್ಕೆ ಬಂದ. ಸ್ಕಂದಗುಪ್ತನ ಶಾಸನಗಳಲ್ಲಿ ಅಜ್ಜ, ಮುತ್ತಜ್ಜನನ್ನು ನೆನೆಯುವಾಗ ಅವರ ಪಟ್ಟದರಸಿಯರ ಉಲ್ಲೇಖವೂ ಇದೆ. ಆದರೆ ಆತನ ತಾಯಿಯ ಉಲ್ಲೇಖವೇ ಇಲ್ಲ. ಅಲ್ಲದೆ ಸ್ಕಂದಗುಪ್ತನ ಅನಂತರ ಬಂದ ಅರಸರ ಶಾಸನಗಳಲ್ಲಿರುವ ಗುಪ್ತರ ವಂಶಾವಳಿಯಲ್ಲಿ ಸ್ಕಂದಗುಪ್ತನ ಹೆಸರೇ ಇಲ್ಲದಿರುವುದು ಆಶ್ಚರ್ಯಕರವಾಗಿದೆ. ಇವುಗಳನ್ನು ಗಮನಿಸಿ ಕೆಲವು ವಿದ್ವಾಂಸರು ಸ್ಕಂದಗುಪ್ತ ಕುಮಾರಗುಪ್ತನ ಪಟ್ಟದ ಮಗನಾಗಿರಲಿಕ್ಕಿಲ್ಲವೆಂದೂ ಆತ ಸಿಂಹಾಸನವನ್ನೇರುವ ಮೊದಲು ತನ್ನ ಪ್ರತಿಸ್ಪರ್ಧಿಗಳೊಡನೆ ಹೋರಾಡಬೇಕಾಯಿತೆಂದೂ ಊಹಿಸಿದ್ದಾರೆ. ಶತ್ರುಗಳನ್ನು ಹಿಮ್ಮೆಟ್ಟಿಸುವ ಸಲುವಾಗಿ ಇವನು ರಣರಂಗದಲ್ಲಿದ್ದಾಗ ಇವನ ಮಲತಾಯಿಯ ಮಗನಾದ ಪುರುಗುಪ್ತ ಸಿಂಹಾಸನವನ್ನೇರಿದನೆಂದೂ ಆದರೆ ಅತಿ ಶೀಘ್ರದಲ್ಲೇ ಸ್ಕಂದಗುಪ್ತ ಇವನನ್ನು ಸೋಲಿಸಿ ಪಟ್ಟಕ್ಕೆ ಬಂದನೆಂದೂ ಊಹಿಸಲಾಗಿದೆ. ಇದರಿಂದ ಸ್ಕಂದಗುಪ್ತನ ಆಳ್ವಿಕೆ ವಿಪತ್ತುಗಳಿಂದ ಕೂಡಿತ್ತೆಂದು ಸ್ಪಷ್ಟವಾಗುತ್ತದೆ. ಶತ್ರುಗಳ ಬಾಧೆಯಿಂದ ಸ್ಕಂದಗುಪ್ತನಿಗೆ ಶಾಂತಿಯಿರದೆ ಹೋಯಿತು. ಈ ಶತ್ರುಗಳಾದರೂ ಯಾರೆಂದು ತಿಳಿಯದು. ಅವರನ್ನು ಮ್ಲೇಂಛರೆಂದು ವರ್ಣಿಸಲಾಗಿದೆ.

	ಆದರೆ ಎಲ್ಲಕ್ಕಿಂತ ಮಿಗಿಲಾಗಿ, ಅನಾಗರಿಕರಾದ ಹೂಣರೊಡನೆ ಸೆಣಸಾಡಬೇಕಾಗಿ ಬಂದುದು ಸ್ಕಂದಗುಪ್ತನ ದುರದೃಷ್ಟವಾಗಿತ್ತು. ಬಿಳಿಯ ಹೂಣರು ಅಥವಾ ಎಪ್ತಲೈಟ್ಸ್ ಎನಿಸಿದ ಇವರು 5ನೆಯ ಶತಮಾನದ ಮಧ್ಯಭಾಗದಲ್ಲಿ ಆಕ್ಸಸ್ ಕೊಳ್ಳದಿಂದ ಇಳಿದು ಪರ್ಷಿಯ ಹಿಂದೂಸ್ತಾನಗಳ ಮೇಲೆ ದಾಳಿ ಮಾಡಿದರು. ಗಾಂಧಾರವನ್ನು ಆಕ್ರಮಿಸಿದ ಇವರು ಅಲ್ಲಿಂದ ಪೂರ್ವಾಭಿಮುಖವಾಗಿ ಮುಂದುವರಿದು ಗುಪ್ತಸಾಮ್ರಾಜ್ಯದ ಮೇಲೆರಗಿದರು. ಇವರ ದಾಳಿ ರಾಜ್ಯದಲ್ಲಿ ಕೋಲಾಹಲವನ್ನುಂಟು ಮಾಡಿ, ರಾಜ್ಯದ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿತು. ಸ್ಕಂದಗುಪ್ತನ ಬಂಗಾರದ ನಾಣ್ಯಗಳು ಅತಿ ವಿರಳವೂ ಅವುಗಳ ಚಿನ್ನದ ಪರಿಶುದ್ಧತೆ ಕಡಿಮೆಯೂ ಆಗಿರುವುದು ಆಗಿನ ನಿರಂತರ ಯುದ್ಧಗಳು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಎಷ್ಟರಮಟ್ಟಿಗೆ ಹದಗೆಡಿಸಿದ್ದುವು ಎಂಬುದನ್ನು ಸೂಚಿಸುತ್ತದೆ.

	ಇಂಥ ವಿಪತ್ಕಾಲದಲ್ಲೂ ಅರಸ ಪ್ರಜೆಗಳ ಕ್ಷೇಮಾಭ್ಯುದಯಕ್ಕಾಗಿ ಸದಾ ಸನ್ನದ್ಧನಿದ್ದನೆಂಬುದು ಗಿರ್ನಾರದಲ್ಲಿ ದೊರೆತ ಸ್ಕಂದಗುಪ್ತ ಶಾಸನದಿಂದ ವ್ಯಕ್ತವಾಗುತ್ತದೆ. ಅಲ್ಲಿಯ ಸುದರ್ಶನ ತಟಾಕವನ್ನು ಮೌರ್ಯವಂಶದ ಚಂದ್ರಗುಪ್ತ ಕಟ್ಟಿಸಿದ. ಕ್ಷತ್ರಪ ರುದ್ರದಾಮನ ಕಾಲದಲ್ಲಿ ಆ ಕೆರೆ ಒಡೆದಾಗ, ಅದನ್ನು ಜೀರ್ಣೋದ್ಧಾರ ಮಾಡಿಸಲಾಯಿತೆಂಬುದನ್ನು ಹಿಂದೆಯೇ ಹೇಳಿದೆ. ಇದರ ಏರಿ ಮತ್ತೊಮ್ಮೆ ಸ್ಕಂದಗುಪ್ತನ ಕಾಲದಲ್ಲಿ, ಬಹುಶಃ ಆತನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿಯೆ, ಮುರಿದುಬಿತ್ತು. ಆಗ ಆ ಪ್ರಾಂತ್ಯದ ಅಧಿಕಾರಿಯಾಗಿದ್ದ ಪರ್ಣದತ್ತನೂ ಆತನ ಮಗನಾದ ಚಕ್ರಪಾಲಿತನೂ ಪುನಃ ಆ ಕೆರೆಯ ದುರಸ್ತಿಗೆ ಸೂಕ್ತ ಏರ್ಪಾಡುಗಳನ್ನು ಮಾಡಿದರು. ಅತಿ ಕ್ಲಿಷ್ಟಕಾಲದಲ್ಲೂ ಧೈರ್ಯಗೆಡದೆ ಶತ್ರುಗಳನ್ನು ಸದೆಬಡಿದು ರಾಜ್ಯವನ್ನು ರಕ್ಷಿಸಿದ ಸ್ಕಂದಗುಪ್ತನ ಆಳ್ವಿಕೆಯದು ಗುಪ್ತರ ಇತಿಹಾಸದಲ್ಲಿ ಒಂದು ಪ್ರಮುಖ ಕಾಲ. ಇವನ ರಾಜ್ಯ ಅರಬ್ಬೀ ಸಮುದ್ರದಿಂದ ಬಂಗಾಳ ಕೊಲ್ಲಿಯ ವರೆಗಿನ ಇಡಿಯ ಉತ್ತರಾಪಥವನ್ನು ಒಳಗೊಂಡಿತ್ತು. ಒಂದನೆಯ ಚಂದ್ರಗುಪ್ತ ರಾಜ್ಯವಾಳತೊಡಗಿದಂದಿನಿಂದ 150 ವರ್ಷಗಳಿಗೂ ಹೆಚ್ಚು ಕಾಲ ಗುಪ್ತರು ಭಾರತವನ್ನು ಭದ್ರವಾಗಿ ಕಾಪಾಡಿಕೊಂಡರು.

ಸ್ಕಂದಗುಪ್ತನ ತರುವಾಯ ಆಳಿದ ಗುಪ್ತವಂಶದ ಅರಸರ ವಿಷಯ ನಮಗೆ ವಿಶೇಷವಾಗಿ ತಿಳಿದಿಲ್ಲ. ಸ್ಕಂದಗುಪ್ತನ ಬಳಿಕ ಅವನ ಮಲಸಹೋದರನಾದ ಪುರುಗುಪ್ತ ಸ್ವಲ್ಪ ಕಾಲ ರಾಜ್ಯವಾಳಿದ. ಈತನ ತಾಯಿ ಅನುತಾದೇವಿ. ಅವರ ಮಕ್ಕಳು ಬುಧಗುಪ್ತ ಮತ್ತು ನರಸಿಂಹಗುಪ್ತ. ಇಮ್ಮಡಿ ಕುಮಾರಗುಪ್ತ 474ರಲ್ಲಿ ರಾಜನಾಗಿದ್ದನೆಂದು ಸೂಚಿಸುವ ಆಧಾರಗಳಿವೆ. ಇವನಾರು ಎಂಬುದು ಗೊತ್ತಿಲ್ಲ. ಬಹುಶಃ ಸ್ಕಂದಗುಪ್ತನ ಮಗನೋ ಬುಧಗುಪ್ತನ ಸೋದರನೋ ಆಗಿದ್ದಿರಬೇಕು.

472ರಲ್ಲಿ ಪಟ್ಟಕ್ಕೆ ಬಂದ ಬುಧಗುಪ್ತ 20 ವರ್ಷಗಳ ಕಾಲ ರಾಜ್ಯವಾಳಿದ. ಈತನ ತಾಯಿ ಚಂದ್ರಾದೇವಿ. ಇವನ ಕಾಲದಲ್ಲಿ ಹೊರನೋಟಕ್ಕೆ ಗುಪ್ತ ಸಾಮ್ರಾಜ್ಯ ಸುಭದ್ರವಾಗಿದ್ದಂತೆ ಕಂಡುಬಂದರೂ ಒಳಗಿಂದೊಳಗೇ ಬಿರುಕುಗಳುಂಟಾಗಿದ್ದುವು. ಗುಜರಾತಿನ ಕಾಠಿಯಾವಾಡದಲ್ಲಿ ವಲ್ಲಭಿನಗರವನ್ನು ರಾಜಧಾನಿಯಾಗಿ ಹೊಂದಿದ್ದ ಮೈತ್ರಕವಂಶದ ಅರಸರು, ಬುಂದೇಲಖಂಡದ ಬಳಿ ಪುವ್ರಾಜಕ ವಂಶದ ಹಸ್ತಿನ, ಸಮೀಪದಲ್ಲಿ ಪಾಂಡುವಂಶದ ಉದಯನ, ಮಾಹಿಷ್ಮತಿಯ ಮಹಾರಾಜ ಸುಬಂಧು, ಇವರೆಲ್ಲ ತೋರಿಕೆಗಾಗಿ ಗುಪ್ತವಂಶದ ಅಧೀನದಲ್ಲಿದ್ದಂತಿದ್ದರೂ, ಸ್ವತಂತ್ರವಾದ ರಾಜ್ಯಗಳನ್ನು ಸ್ಥಾಪಿಸುವ ಹವಣಿಕೆಯಲ್ಲಿದ್ದರು. ಕುಮಾರಗುಪ್ತನ ಮರಣಾನಂತರ ರಾಜ್ಯಕ್ಕಾಗಿ ಅರಸರಲ್ಲಿ ನಡೆದ ಪರಸ್ಪರ ವೈಷಮ್ಯಗಳಲ್ಲದೆ, ಮತ್ತೊಮ್ಮೆ ಪರಕೀಯರ ದಾಳಿಗೆ ಈ ಸಾಮ್ರಾಜ್ಯ ತುತ್ತಾಯಿತು. ಇದು ಗುಪ್ತರಾಜ್ಯದ ಅವನತಿಗೆ ಒಂದು ಕಾರಣವಾಯಿತು.

ವಾಕಾಟಕ ವಂಶದ ನರೇಂದ್ರಸೇನ ಕೋಸಲ ಮತ್ತು ಮಾಳವ ದೇಶಗಳನ್ನು ಈ ವೇಳೆಗೆ ತನ್ನ ಅಧೀನದೊಳಗೆ ತಂದುಕೊಂಡಿದ್ದ. ಇವು ಗುಪ್ತ ಸಾಮ್ರಾಜ್ಯದ ಭಾಗಗಳಾಗಿದ್ದುವು. ನರೇಂದ್ರಸೇನ ಅವುಗಳನ್ನು ಬಹುಶಃ ಬಲಪ್ರಯೋಗ ಮಾಡಿಯೇ ಪಡೆದಿರಬೇಕು.

ಬುಧಗುಪ್ತನ ಅನಂತರ ಅವನ ಸಹೋದರನಾದ ನರಸಿಂಹಗುಪ್ತನೂ ಅವನ ತರುವಾಯ ಅವನ ಮಗನಾದ ಮುಮ್ಮಡಿ ಕುಮಾರಗುಪ್ತನೂ (ವಿಕ್ರಮಾದಿತ್ಯ) ಮೊಮ್ಮಗನಾದ ವಿಷ್ಣುಗುಪ್ತನೂ (ಚಂದ್ರಾದಿತ್ಯ) ಕ್ರಮವಾಗಿ 500 ರಿಂದ 570ರ ಒಂದು ಶಾಸನದಲ್ಲಿ ವೈನ್ಯಗುಪ್ತನೆಂಬ ಅರಸನೂ 510ರ ಶಾಸನದಲ್ಲಿ ಭಾನುಗುಪ್ತನೆಂಬ ಇನ್ನೊಬ್ಬ ಅರಸನೂ ಹೆಸರಿಸಲ್ಪಟ್ಟಿದ್ದಾರೆ. ಇವರಿಬ್ಬರ ನಡುವಣ ಸಂಬಂಧವಾಗಲಿ ಇವರ ಮತ್ತು ನರಸಿಂಹಗುಪ್ತನ ನಡುವಣ ಸಂಬಂಧವಾಗಲಿ ತಿಳಿಯದು. ಬುಧಗುಪ್ತನ ಅನಂತರ ಗುಪ್ತಮನೆತನದಲ್ಲಿ ಅಂತಃಕಲಹಗಳೇರ್ಪಟ್ಟು ಈ ಮೂವರೂ ತಾವು ಅಧಿಕಾರದಲ್ಲಿದ್ದು ಪ್ರದೇಶಗಳಲ್ಲಿಯೇ ಸ್ವತಂತ್ರವಾಗಿ ಕೆಲಕಾಲ ಆಳಿದಂತೆ ತೋರುತ್ತದೆ. ಇವರಲ್ಲಿ ಭಾನುಗುಪ್ತ ತನ್ನ ಸಾಮಂತನಾದ ಗೋಪರಾಜನೊಡಗೂಡಿ ಏರಾಣದಲ್ಲಿ ನಡೆದ ಕದನದಲ್ಲಿ ಹೋರಾಡಿದನೆಂದು ಅಲ್ಲಿಯ ಶಾಸನದಿಂದ ತಿಳಿದುಬರುತ್ತದೆ. ಆಗ ದಾಳಿ ಮಾಡಿದ ಹೂಣರ ನಾಯಕ ತೋರಮಾನನೊಡನೆ ಬಹಶಃ ಇವರಿಬ್ಬರೂ ಹೋರಾಡಿರಬಹುದು.

ಇದರಂತೆಯೇ ನರಸಿಂಹಗುಪ್ತನೂ ಹೂಣವಂಶದ ಮಿಹಿರಕುಲನೊಡನೆ ಕಾದಾಡಿ ಅವನನ್ನು ಸೋಲಿಸಿದ. ಈತ ಬಾಲಾದಿತ್ಯನೆಂಬ ಬಿರುದನ್ನು ಪಡೆದಿದ್ದ. ಹ್ಯೂಯೆನ್‍ತ್ಸಾಂಗನ ಹೇಳಿಕೆಯನ್ನು ಗಮನಿಸಿದರೆ ನರಸಿಂಹಗುಪ್ತ ಬಾಲಾದಿತ್ಯ ಮೊದಲು ಮಿಹಿರಕುಲನಿಂದ ಸೋಲನ್ನನುಭವಿಸಿ ಅವನಿಗೆ ಕಪ್ಪಕಾಣಿಕೆಗಳನ್ನು ಸಲ್ಲಿಸಿದರೂ ಕೊನೆಗೆ ಅವನನ್ನು ಪರಾಭವಗೊಳಿಸಿದನೆಂದು ತೋರುತ್ತದೆ.
ನರಸಿಂಹಗುಪ್ತನೇ ಗುಪ್ತವಂಶದ ಕೊನೆಯ ಅರಸನೆಂದು ಹೇಳಬಹುದು. ಅವನ ಅನಂತರ ಮಗನಾದ ಮುಮ್ಮಡಿ ಕುಮಾರಗುಪ್ತನೂ ಮೊಮ್ಮಗನಾದ ವಿಷ್ಣುಗುಪ್ತನೂ 535ರಿಂದ 570ರ ವರೆಗೆ ಕ್ರಮವಾಗಿ ಆಳಿದರು. ಆ ವೇಳೆಗಾಗಲೇ ಹೂಣರ ದಾಳಿಯಿಂದ ಅಂತಃಕಲಹಗಳಿಂದ ಜರ್ಝರಿತವಾಗಿದ್ದ ಗುಪ್ತ ಸಾಮ್ರಾಜ್ಯ ಸು. 570ರ ವೇಳೆಗೆ ಅಸ್ತಂಗತವಾಯಿತು.

ವೈನ್ಯಗುಪ್ತ ಮತ್ತು ಭಾನುಗುಪ್ತರೆಂಬ ಇನ್ನಿಬ್ಬರು ಅರಸರು ಆಳಿದರೆನ್ನಲು ಅವರ ಶಾಸನಗಳಿವೆ. ಆದರೆ ಮೂಲಮನೆತನದೊಡನೆ ಅವರ ಸಂಬಂಧ ತಿಳಿಯದು.							(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ